ನಿಂತ ನೆಲ ಬಿಡದೇ ಒಗ್ಗಟ್ಟಾಗಿ ಪ್ರತಿರೋಧ ತೋರುತ್ತಿರುವ ಅಲ್ಪಸಂಖ್ಯಾತ ಹಿಂದುಸಮಾಜ
ಪ್ರತ್ಯೇಕ ಮುಸ್ಲಿಂ ದೇಶ ಬೇಕೆಂಬ ಒತ್ತಡಕ್ಕೆ ಅಂದಿನ ನಾಯಕರು ಬಗ್ಗಿದ ಪರಿಣಾಮ 1947ರಲ್ಲಿ ಪಾಕಿಸ್ತಾನ ಎಂಬ ಮುಸ್ಲಿಂ ದೇಶ ಹುಟ್ಟಿಕೊಂಡಿತು. ಇಂದಿನ ಬಾಂಗ್ಲಾದೇಶವೂ ಪಾಕಿಸ್ತಾನದಲ್ಲೇ ಇತ್ತು. ಆದರೂ, ಪೂರ್ವದಲ್ಲಿನ ಬಾಂಗ್ಲಾಕ್ಕೂ, ಪಶ್ಚಿಮದ ಸಿಂಧ್, ಪಂಜಾಬ್ ಮೊದಲಾದ ಭಾಗಗಳಿಗೂ ಸಾಂಸ್ಕೃತಿಕವಾಗಿಯೂ, ಭಾಷೆಯ ದೃಷ್ಟಿಯಿಂದಲೂ ತಾಳಮೇಳ ಹೊಂದಾಣಿಕೆಯಾಗುತ್ತಿರಲಿಲ್ಲ. ಹಾಗಾಗಿ, ಬಾಂಗ್ಲಾದಲ್ಲಿ ಪುನಃ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಯಿತು. 1971 ರಲ್ಲಿ ನಡೆದ ಬಾಂಗ್ಲಾ ಮುಕ್ತಿ ಆಂದೋಲನದಲ್ಲಿ ಹೋರಾಟಗಾರರನ್ನು ಬಗ್ಗುಬಡಿಯಲು ಪಾಕಿಸ್ತಾನ ಸೈನ್ಯಬಲ ಪ್ರಯೋಗಿಸಿದಾಗ, ಭಾರತ ರಣಕಣಕ್ಕಿಳಿದು ಪಾಕಿಸ್ತಾನವನ್ನು ಸೋಲಿಸಿ ಬಾಂಗ್ಲಾದೇಶ ಎನ್ನುವ ಹೊಸ ದೇಶದ ಉದಯಕ್ಕೆ ಕಾರಣವಾಯಿತು. ಹಾಗೆ ನೋಡಿದರೆ, ಭಾರತವೇ ಬಾಂಗ್ಲಾದೇಶದ ಜನಕ ಎನ್ನಲು ಅಡ್ಡಿಯಿಲ್ಲ.
ಬಾಂಗ್ಲಾದಲ್ಲಿ ಹಿಂದು ದಮನದ ಇತಿಹಾಸ
ಈ ಆಂದೋಲನದ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಬಲಿಯಾದದ್ದು ಮಾತ್ರ ಹಿಂದುಗಳೇ. ಲಕ್ಷಾಂತರ ಹಿಂದುಗಳ ಮಾರಣಹೋಮ ಬಾಂಗ್ಲಾದಲ್ಲಿ ನಡೆಯಿತು. ಎಷ್ಟು ಹಿಂದು ಮನೆಗಳಿಗೆ ಬೆಂಕಿಯಿಟ್ಟರು, ಎಷ್ಟು ಹಿಂದು ಮಹಿಳೆಯರ ಮೇಲೆ ಅತ್ಯಾಚಾರವಾಯಿತು ಎಂಬುದರ ಲೆಕ್ಕವಿಟ್ಟವರು ಯಾರೂ ಇಲ್ಲ. ಆಗ ದೇಶ ಬಿಟ್ಟು ಬಂದ ಹಿಂದುಗಳಿಗೆ ಭಾರತ ಸಹಜ ಆಶ್ರಯತಾಣವಾಯಿತು. ಹಾಗೆ ಬಂದ ನಿರಾಶ್ರಿತ ಹಿಂದುಗಳ ಶಿಬಿರಗಳು ಭಾರತದಲ್ಲಿ ಅನೇಕ ಕಡೆ ಇವೆ. ನಮ್ಮ ಕರ್ನಾಟಕದ ಸಿಂಧನೂರಿನ ಬಳಿಯೂ ಅಂತಹ ನಿರಾಶ್ರಿತರ ಶಿಬಿರವಿದೆ. ಅಲ್ಲಿ ಈಗ ಇರುವವರ ಸಂಖ್ಯೆ 30,000 ದಷ್ಟು. ಅವರು ಅನುಭವಿಸಿದ ನರಕಯಾತನೆ ಕೇಳಿದರೆ, ಎಂತಹವರಿಗೂ ಕಣ್ಣೀರು ಬರದಿರದು! ಅಳಿದುಳಿವರು ಹೇಳಿದ ಕಥೆ ಪ್ರಪಂಚಕ್ಕೆ ಗೊತ್ತಿದೆ ಅಷ್ಟೇ. ತಮ್ಮ ನೋವಿನ ಕಥೆಯೊಂದಿಗೇ ಮಣ್ಣಾಗಿ ಹೋದವರು ಅದೆಷ್ಟೋ ಮಂದಿ.
1951 ರ ಜನಗಣತಿಯ ಪ್ರಕಾರ ಬಾಂಗ್ಲಾದೇಶದಲ್ಲಿದ್ದ ಹಿಂದುಗಳ ಜನಸಂಖ್ಯೆ ಶೇ, 22 ರಷ್ಟು. ಈಗ ಅಲ್ಲಿನ ಹಿಂದುಗಳ ಜನಸಂಖ್ಯೆ ಶೇ. 7 ಮಾತ್ರ ಎಂದರೆ, ಉಳಿದ ಹಿಂದುಗಳು ಎಲ್ಲಿ ಹೋದರು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಬೇರೆ ಬೇರೆ ದೇಶಕ್ಕೆ ವಲಸೆ ಹೋದ ಹಿಂದುಗಳು ಕೆಲವರಾದರೆ, ಪ್ರತಿನಿತ್ಯ ಎಂಬಂತೆ ನಡೆದ ಹಿಂಸಾಚಾರಕ್ಕೆ ಬಲಿಯಾದವರು ಇನ್ನು ಕೆಲವರು. ಮುಸ್ಲಿಂ ದೇಶದಲ್ಲಿನ ಹಿಂದುಗಳ ದಯನೀಯ ಸ್ಥಿತಿ ತಮ್ಮ ಮಕ್ಕಳಿಗೆ ಬರದಿರಲಿ ಎಂಬ ಕಾರಣಕ್ಕೆ ಮಕ್ಕಳ ಸಂಖ್ಯೆಯನ್ನೇ ಹಿಂದುಗಳು ಕಡಿಮೆ ಮಾಡಿಕೊಂಡರೆ, ಮುಸ್ಲಿಮರು ಮಾತ್ರ ಎಗ್ಗಿಲ್ಲದೇ ತಮ್ಮ ಜನಸಂಖ್ಯೆಯನ್ನು ಹೆಚ್ಚಿಸುತ್ತಾ ಹೋದರು. ಸ್ವಾತಂತ್ರ್ಯ ಬಂದಲ್ಲಿಂದ ಇಲ್ಲಿಯವರೆಗೂ ಹಿಂದು ಮನೆಗಳ ಧ್ವಂಸ, ದೇವಾಲಯಗಳ ನಾಶ, ಅತ್ಯಾಚಾರಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ. ಇದಕ್ಕೆಲ್ಲ ಸರ್ಕಾರದ ಪರೋಕ್ಷ ಬೆಂಬಲವಿದ್ದದ್ದರಿಂದ ಹಿಂದುಗಳ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಬಂದಿದೆ.
ಮತ್ತೆ ನಡೆದಿದೆ ಹಿಂದು ಹತ್ಯಾಕಾಂಡ
ಈಗ ಮತ್ತೆ ಬಾಂಗ್ಲಾದೇಶ ಸುದ್ದಿಯಲ್ಲಿರುವುದು ಅಲ್ಲಿ ಉಂಟಾಗಿರುವ ಅರಾಜಕತೆಯಿಂದ. 1971 ರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರಿಗೆ ಸರ್ಕಾರ ಮೀಸಲಾತಿ ಕೊಡುತ್ತಿತ್ತು. ಅವರ ಮಕ್ಕಳು ಮೊಮ್ಮಕ್ಕಳಿಗೂ ಇದು ವಿಸ್ತರಿಸಿತು. ಈ ವಿಷಯವಾಗಿ ನಡೆದ ಆಂದೋಲನವು ಪ್ರಧಾನಿ ಶೇಕ್ ಹಸೀನಾ ರಾಜೀನಾಮೆ ಕೊಟ್ಟು ಜೀವ ಉಳಿಸಿಕೊಳ್ಳಲು ಭಾರತಕ್ಕೆ ಬಂದು ಆಶ್ರಯ ಪಡೆಯುವವರೆಗೂ ಬಂದು ನಿಂತಿತು. ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಅಲ್ಲಿನ ಸಾಮಾಜಿಕ ನಾಯಕ ಮೊಹಮದ್ ಯೂನಸ್ ಅವರ ನೇತೃತ್ವದ ತಾತ್ಕಾಲಿಕ ಸರ್ಕಾರ ಅಲ್ಲಿ ಈಗ ನಡೆಯುತ್ತಿದೆ. ಸರ್ಕಾರದಲ್ಲಿ ಅವರಿದ್ದರೂ ಅಲ್ಲಿ ನಡೆಯುತ್ತಿರುವ ಕಾರುಬಾರು ಮುಸ್ಲಿಂ ಮೂಲಭೂತವಾದಿಗಳದ್ದೇ. ಬಾಂಗ್ಲಾದ ಜನಕ ಎಂಬ ಬಿರುದು ಪಡೆದ ಮೊದಲ ಅಧ್ಯಕ್ಷ ಮುಜೀಬುರ್ ರೆಹಮಾನ್ ಅವರ ಪ್ರತಿಮೆಯನ್ನು ಮುಸ್ಲಿಂ ಮತಾಂಧರು ಧ್ವಂಸ ಮಾಡಿದರು. ದೇಶದೆಲ್ಲೆಡೆ ಅನೇಕ ಪ್ರತಿಮೆಗಳನ್ನೂ, ಚಿತ್ರಗಳುಳ್ಳ ಗೋಡೆಗಳನ್ನೂ ನಾಶ ಮಾಡಲಾಯಿತು. ಸಂಗೀತಜ್ಞ ರಾಹುಲ್ ಆನಂದ್ ಅವರ 140 ವರ್ಷ ಹಳೆಯ ಮನೆಯ ಮೇಲೆ ಧಾಳಿ ನಡೆಯಿತು. ಅವರು ಸಂಗ್ರಹಿಸಿಟ್ಟಿದ್ದ 3,000 ಕ್ಕೂ ಹೆಚ್ಚು ಸಂಗೀತ ಉಪಕರಣಗಳಿಗೆ ಬೆಂಕಿಯಿಟ್ಟರು. ಇಸ್ಲಾಮಿನಲ್ಲಿ ಪ್ರತಿಮೆಗಳಿಗೂ, ಸಂಗೀತಕ್ಕೂ ನಿಷೇಧವಿದೆಯಲ್ಲ, ಅದಕ್ಕೇ ಇವು ಇರಬಾರದು ಎಂಬಷ್ಟು ಮತಾಂಧತೆ! ಸುಮಾರು 500 ಕ್ಕೂ ಹೆಚ್ಚು ಕಡೆ ಹಿಂದುಗಳ ಮೇಲೆ ಧಾಳಿ, ನೂರಾರು ದೇವಸ್ಥಾನಗಳ ನಾಶ, ನೂರಾರು ತಾಯಂದಿರ ಮೇಲೆ ಅತ್ಯಾಚಾರ, ಸಾವಿರಕ್ಕೂ ಹೆಚ್ಚು ಹಿಂದುಗಳ ಕೊಲೆ ನಡೆದಿದೆ. ಹಿಂದುಗಳಿಗೂ ಅಲ್ಲಿನ ಹೋರಾಟಕ್ಕೂ ಯಾವ ಸಂಬಂಧವೂ ಇಲ್ಲದಿದ್ದರೂ ಮುಸ್ಲಿಮರ ಸಿಟ್ಟಿಗೆ ಬಲಿಯಾದವರು ಮಾತ್ರ ಹಿಂದುಗಳು. ಡ್ಯಾನಿಶ್ ಪತ್ರಿಕೆಯೊಂದು ಪ್ರವಾದಿ ಮೊಹಮದ್ ಮೇಲಿನ ವ್ಯಂಗಚಿತ್ರ ಪ್ರಕಟಿಸಿದಾಗ ಬೆಂಗಳೂರಿನಲ್ಲಿ ಕಲ್ಲು ತೂರಾಟ ನಡೆದು ಹಿಂದುಗಳ ಮೇಲೆ ಧಾಳಿ ನಡೆಯಲಿಲ್ಲವೇ? ಯಾರ ಮೇಲೆ ಸಿಟ್ಟು ಬಂದರೂ ಆಕ್ರಮಣ ಮಾಡುವುದು ಮಾತ್ರ ಕಾಫಿರರ ಮೇಲೆಯೇ.
ಯಾವ ಪಾಕಿಸ್ತಾನದ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಪಡೆದಿದ್ದರೋ ಅದೇ ಪಾಕಿಸ್ತಾನದ ಪರ ಒಲವು ಈಗ ಅಲ್ಲಿ ಜಾಸ್ತಿಯಾಗುತ್ತಿದೆ! ಬಾಂಗ್ಲಾದೇಶವನ್ನು ಇಸ್ಲಾಮಿಕ್ ದೇಶವೆಂದು ಘೋಷಿಸಬೇಕೆಂಬ ಬೇಡಿಕೆ ಶುರುವಾಗಿದೆ. ಅಷ್ಟೇ ಅಲ್ಲ, ಅದು ಆದರೂ ಆಗದಿದ್ದರೂ ಅಲ್ಲಿನ ಹಿಂದುಗಳ ತಲೆಯ ಮೇಲಂತೂ ತೂಗುಗತ್ತಿ ಇದ್ದದ್ದೇ. ಇಷ್ಟು ವರ್ಷಗಳ ಕಾಲ ಎಲ್ಲವನ್ನೂ ಸಹಿಸಿಕೊಂಡಿದ್ದ ಹಿಂದುಗಳು ಮೊನ್ನೆ ಆಗಸ್ಟ್ನಲ್ಲಿ ಹಿಂಸಾಚಾರ ಜಾಸ್ತಿಯಾದಾಗ ಬೀದಿಗಿಳಿದು ಪ್ರತಿಭಟಿಸಿದರು. ಢಾಕಾದಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು.
ಹಿಂದು ಸಂನ್ಯಾಸಿ ಚಿನ್ಮಯ ಕೃಷ್ಣದಾಸರ ಬಂಧನ
ಮೊನ್ನೆ ಮೊನ್ನೆ ಅಲ್ಲಿನ ಹಿಂದು ಸಮಾಜಕ್ಕೆ ನೇತೃತ್ವ ಕೊಡುತ್ತಿದ್ದ ಇಸ್ಕಾನ್ನ ಪ್ರಭು ಚಿನ್ಮಯ ಕೃಷ್ಣದಾಸ ಅವರನ್ನು ಏಕಾಏಕಿ ಬಂಧಿಸಲಾಗಿದೆ. ಒಂದು ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಕ್ಕಿಂತ ಭಗವಾಧ್ವಜವನ್ನು ಎತ್ತರಕ್ಕೆ ಹಾರಿಸಿದ್ದರೆಂಬ ದೇಶದ್ರೋಹದ ಆಪಾದನೆಯನ್ನು ಅವರ ಮೇಲೆ ಹೊರಿಸಲಾಗಿದೆ. ಅವರ ಪರವಾಗಿ ನ್ಯಾಯಾಲಯದಲ್ಲಿ ವಾದ ಮಾಡಲು ಬರದಂತೆ ವಕೀಲರಿಗೆ ಬೆದರಿಕೆ ಹಾಕಲಾಗಿದೆ. ಹಾಗಾಗಿ, ಅವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಕೊರೋನಾ ಕಾಲದಲ್ಲಿ ಸಾವಿರಾರು ಜನರಿಗೆ ನಿತ್ಯ ಅನ್ನದಾನ ಮಾಡಿದ ಸಂನ್ಯಾಸಿ ಇವರು. ವಿಪರ್ಯಾಸವೆಂದರೆ, ಯಾರು ಅಂದು ಇಸ್ಕಾನ್ನ ಊಟ ಮಾಡಿದ್ದರೋ ಅವರೇ ಇಂದು ಇಸ್ಕಾನ್ ನಿಷೇಧ ಮಾಡಿ ಎಂಬ ಬೇಡಿಕೆಯಿಡುತ್ತಿದ್ದಾರೆ. ಕಾಫಿರನೊಬ್ಬ ಎಷ್ಟೇ ಸಹಾಯ ಮಾಡಿರಲಿ, ಜೀವ ಉಳಿಸಿರಲಿ, ಆತ ಎಂದಿಗೂ ಕಾಫಿರನೇ. ಆತನೊಂದಿಗೆ ಯಾವ ಕರುಣೆ, ಸ್ನೇಹವೂ ಸಲ್ಲ ಎಂಬ ಇಸ್ಲಾಮಿನ ಸಿದ್ಧಾಂತವನ್ನು ಈ ಮತಾಂಧರು ಪದೇ ಪದೇ ಸಾಬೀತುಪಡಿಸುತ್ತಿದ್ದಾರೆ! 1990 ರ ಕಾಶ್ಮೀರ ಕಣಿವೆಯಲ್ಲಿ ಹಿಂದುಗಳ ಮಾರಣಹೋಮ ನಡೆಸಿದವರೂ ಎಲ್ಲಿಂದಲೋ ಬಂದವರಲ್ಲ. ಪಕ್ಕದ ಮನೆಯ ಮುಸ್ಲಿಮರೇ, ನಿನ್ನೆ ಮೊನ್ನೆಯವರೆಗೂ ಸ್ನೇಹಿತರಂತೆ ಇದ್ದವರೇ!
ಬಾಂಗ್ಲಾ ಹಿಂದುಗಳಿಗೆ ಬೇಕಿದೆ ಎಲ್ಲರ ಬೆಂಬಲ
ಇಂದು ಬಾಂಗ್ಲಾದ ಹಿಂದುಗಳು ತಮ್ಮ ಜಾಗ ಬಿಡದೇ ಮಾಡು ಇಲ್ಲವೇ ಮಡಿ ಎಂಬಂತೆ ಹೋರಾಟ ಮಾಡಲು ನಿರ್ಧರಿಸಿದ್ದಾರೆ. ತಮ್ಮ ದೇವಾಲಯಗಳನ್ನು ರಾತ್ರಿ ಹಗಲೆನ್ನದೇ ಕಾಯುತ್ತಿದ್ದಾರೆ, ಗ್ರಾಮಗಳಲ್ಲಿ ಯುವಕರ ಪಹರೆಯಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಅವರೊಂದಿಗೆ ನಿಲ್ಲಬೇಕಿದೆ. ಬಾಂಗ್ಲಾ ಅಲ್ಪಸಂಖ್ಯಾತರಾದ ಹಿಂದೂ ಬೌದ್ಧ ಕ್ರಿಶ್ಚಿಯನ್ನರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ವಿಶ್ವದೆಲ್ಲೆಡೆಯಿಂದ ಬಾಂಗ್ಲಾ ಸರ್ಕಾರದ ಮೇಲೆ ಒತ್ತಡ ಬರುತ್ತಿದೆ. ನಮ್ಮ ಬೆಂಬಲ ಅವರಿಗೆ ನೈತಿಕ ಸ್ಥೈರ್ಯವನ್ನು ಕೊಡಲಿದೆ. ಪರಿಸ್ಥಿತಿಯನ್ನು ಎದುರಿಸಲು ಬಲ ತುಂಬಲಿದೆ.
ಬಾಕ್ಸ್ನಲ್ಲಿ
ನಾಮಶೂದ್ರ ಎಂಬ ನತದೃಷ್ಟ ಸಮಾಜ
ಬಾಂಗ್ಲಾದಲ್ಲಿರುವ ಹಿಂದುಗಳಲ್ಲಿ ಹೆಚ್ಚಿನವರು ನಾಮಶೂದ್ರ ಎಂಬ ಪರಿಶಿಷ್ಟ ಜಾತಿಯವರು, ಅವರಲ್ಲಿ ಹೆಚ್ಚಿನವರು ಕೂಲಿ ಕಾರ್ಮಿಕರು, ಕೃಷಿಕರು, ಮೀನುಗಾರರು. ಶ್ರೀಮಂತರು ಎಂದು ಹೇಳಬಹುದಾದವರು ಎಲ್ಲೋ ಕೆಲವು ಮಂದಿ ಮಾತ್ರ. 1906 ರಲ್ಲಿ ಬಂಗಾಳ ವಿಭಜನೆಯಾದಾಗ ಮೇಲ್ವರ್ಗದ ಹೆಚ್ಚಿನವರು ಈಗ ಭಾರತದಲ್ಲಿರುವ ಬಂಗಾಳಕ್ಕೆ ವಲಸೆ ಬಂದುಬಿಟ್ಟರು. ಅಷ್ಟೇನೂ ವಿದ್ಯಾವಂತರಲ್ಲದ, ಪ್ರಪಂಚದ ಆಗುಹೋಗುಗಳ ಬಗ್ಗೆ ಹೆಚ್ಚು ಅರಿವು ಇಲ್ಲದ ಮುಗ್ಧ ಸಮಾಜ ಮಾತ್ರ ಅಲ್ಲೇ ಉಳಿದುಬಿಟ್ಟಿತು. ಹಾಗೆಯೇ, ಪಾಕಿಸ್ತಾನದ ಮೊದಲ ಕಾನೂನು ಮಂತ್ರಿಯಾಗಿದ್ದ ಜೋಗೇಂದ್ರನಾಥ ಮಂಡಲ್ ಅವರೂ ಇದೇ ನಾಮಶೂದ್ರ ಸಮಾಜಕ್ಕೆ ಸೇರಿದವರು. ಪಾಕಿಸ್ತಾನ ಸೆಕ್ಯುಲರ್ ದೇಶವಾಗಿ ಉಳಿಯಲಿದೆ ಎಂಬ ಆಶಯದಿಂದ ಅಲ್ಲೇ ಉಳಿದು ಸರ್ಕಾರದಲ್ಲಿ ಮಂತ್ರಿಯಾದ ಕೆಲವೇ ದಿನಗಳಲ್ಲಿ ಅವರಿಗೆ ನಿಜಸ್ಥಿತಿಯ ಅರಿವಾಗತೊಡಗಿತು. ಎಲ್ಲೆಡೆ ಹಿಂದುಗಳ ಮೇಲೆ ಹಿಂಸಾಚಾರ ನಡೆಯುತ್ತಿತ್ತು. ಅದರಲ್ಲಿ ಪೆಟ್ಟು ತಿಂದಿದ್ದು ಈ ತಳಸಮುದಾಯದವರೇ! ಸರ್ಕಾರದ ಅಧಿಕಾರಿಗಳು, ಪೊಲೀಸರೇ ಮತಾಂಧರ ಜತೆ ಕೈಜೋಡಿಸಿ ಹಿಂದೂದಮನ ಮಾಡುತ್ತಿರುವುದನ್ನು ನೋಡಿದ ಅವರು ಅನುಭವಿಸಿದ ವ್ಯಥೆ ಅಷ್ಟಿಷ್ಟಲ್ಲ. ಸರ್ಕಾರಕ್ಕೆ ಪತ್ರ ಬರೆದರು, ಅಧಿಕಾರಿಗಳನ್ನು ಭೇಟಿ ಮಾಡಿ ಹಿಂದುಗಳ ರಕ್ಷಣೆಗೆ ಆಗ್ರಹಿಸಿದರು. ಯಾವುದೂ ಫಲ ನೀಡಲಿಲ್ಲ, ಕೊನೆಗೆ ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕೊಲ್ಕತ್ತಾಕ್ಕೆ ಬಂದು ನೆಲೆಸಿದರು. ತನ್ನ ಜನರನ್ನು ರಕ್ಷಿಸಲಾಗಲಿಲ್ಲ ಎಂಬ ನೋವು ಮಾತ್ರ ಅವರನ್ನು ಕೊನೆಯವರೆಗೆ ಕಾಡುತ್ತಲೇ ಇತ್ತು.



