ಜೀವ ಜಲ ಎಂದು ಕರೆಸಿಕೊಳ್ಳುವ ನೀರು, ಜೀವಸಂಕುಲದ ಅಸ್ತಿತ್ವಕ್ಕೆ ಅತ್ಯಂತ ಅಗತ್ಯವಾದ ಅಂಶವಾಗಿದೆ. ನೀರಿಲ್ಲದ ಜೀವನವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ನಾವು ಕುಡಿಯಲಿಕ್ಕೆ ಅಥವಾ ಜೀವಂತ ಇರುವುದಕ್ಕೆ ಎಷ್ಟು ಪ್ರಮಾಣದ ನೀರು ಅಗತ್ಯವೋ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಾವು ಬಳಸುವ ಎಲ್ಲಾ ವಸ್ತುಗಳ ತಯಾರಿಕೆಗೆ ಅಂದರೆ ಬಟ್ಟೆ ಯಂತ್ರೋಪಕರಣ ಮನೆಯ ವಾಹನ ಸೇರಿದಂತೆ ಪ್ರತಿ ವಸ್ತುಗಳ ತಯಾರಿಕೆಗೂ ಅನಿವಾರ್ಯ ಮನುಷ್ಯ ಮಾತ್ರವಲ್ಲದೆ ಗಿಡಮರಗಳು ಪ್ರಾಣಿ ಪಕ್ಷಿಗಳು ಜಲಚರಗಳು ಜೀವ ಸಂಕುಲದ ಅಸ್ತಿತ್ವ ನೀರಿನ ಮೇಲೆ ಅವಲಂಬಿತವಾಗಿದೆ. ಹೀಗೆ ಪ್ರಕೃತಿಯ ಚಕ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುವ ನೀರಿನ ಅಗತ್ಯತೆ ಬಗ್ಗೆ ನಮಗೆಲ್ಲ ತಿಳಿದೇ ಇದೆ. ಇಷ್ಟೆಲ್ಲಾ ತಿಳಿದಿದ್ದರೂ ಸಹ ಜಲ ಸಂರಕ್ಷಣೆ ವಿಷಯ ಬಂದಾಗ ಜಲ ಸಂರಕ್ಷಣೆ ಜವಾಬ್ದಾರಿ ಸರ್ಕಾರದ್ದು, ಪರಿಸರ ಹಿತಾಸಕ್ತರದ್ದು, ಸ್ಥಳೀಯ ವ್ಯವಸ್ಥೆಯದ್ದೋ ಎಂದು ಕೈ ಚಾಚಿ ಕುಳಿತುಕೊಳ್ಳುವವರ ಸಂಖ್ಯೆಯೇ ಹೆಚ್ಚು. ನನ್ನ ಅಸ್ತಿತ್ವಕ್ಕೆ ಕಾರಣವಾದ ನೀರಿನ ಸಂರಕ್ಷಣೆಯಲ್ಲಿ ನನ್ನದೇ ಮುಖ್ಯ ಪಾತ್ರ ಎಂಬ ಜವಾಬ್ದಾರಿ ಪ್ರಸ್ತುತದಲ್ಲಿ ಕಾಣಿಸಿಕೊಳ್ಳುವುದು ತುಂಬಾ ವಿರಳ. ವಾಸ್ತವದಲ್ಲಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಜಲವನ್ನು ಕೇವಲ ಒಂದು ದ್ರವ ವಸ್ತು ಎಂದಾಗಲಿ ಮತ್ತು ಜಲಮೂಲಗಳನ್ನು ಕೇವಲ ಒಂದು ಸ್ಥಳ ಎಂದು ಪರಿಗಣಿಸದೆ ಜಲ ಮತ್ತು ಜಲ ಮೂಲಗಳಲ್ಲಿ ದೈವ ಸ್ವರೂಪವನ್ನು ನೋಡಲಾಗಿದೆ. ಜಲ ಕೇವಲ ನಮಗೆ ಭೌತಿಕ ಸಂಪತ್ತಲ್ಲ ಅದು ಸೃಷ್ಟಿಯ ಮೂಲ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ‘ಸರ್ವಂ ಆಪಃ’ ಎಂದರೆ ಜಲವೇ ಎಲ್ಲಾ ವಸ್ತುಗಳ ಮೂಲ ಎಂಬ ಉಲ್ಲೇಖವಿದೆ. ಸನಾತನ ಪರಿಭಾಷೆಯಲ್ಲಿ ಜೀವನಾಧಾರವಾಗಿರುವ ಅಂಶಗಳೆಲ್ಲವೂ ನಮಗೆ ಪೂಜನೀಯ ಮತ್ತು ಗೌರವಾರ್ಥ. ಈ ಪೂಜಾರ್ಹ ವಸ್ತುಗಳನ್ನು, ಅವಶ್ಯಕತೆಗೆ ಮೀರಿ ಉಪಭೋಗಿಸುವುದು ನಿಷಿದ್ಧವಾಗಿದೆ. ‘ತೇನ ತ್ಯಕ್ತೇನ ಭುಂಜಿಥಾ’ ಎಂದು ಈಶೋಪನಿಷತ್‌ನಲ್ಲಿ ನಮ್ಮ ಋಷಿಮುನಿಗಳು ಹೇಳಿದ್ದಾರೆ. ಪ್ರಕೃತಿ ಅಥವಾ ಪ್ರಕೃತಿಯಲ್ಲಿನ ಸಂಪತ್ತು ನಮಗೆ ಭೋಗದ ವಸ್ತುಗಳಲ್ಲ. ಪ್ರಕೃತಿಯ ಮುಖ್ಯ ಭಾಗವಾದ ಜಲ ನಮಗೆ ಆಧ್ಯಾತ್ಮಿಕತೆಯ ಸಾಧನ. ಯಾವುದೇ ಶುಭ ಕಾರ್ಯಗಳನ್ನು ಮಾಡುವಾಗ ‘ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೆ ಸಿಂಧು ಕಾವೇರಿ ಜಲಸ್ಮೀನ್ ಸನ್ನಿಧಿಂ ಕುರು’ ಎಂದು ಪವಿತ್ರ ನದಿಗಳ ನೀರನ್ನು ಆವಾಹನೆ ಮಾಡುತ್ತೇವೆ. ಶುಭಕಾರ್ಯಗಳಿಗೆ ಮಾತ್ರವೇ ಅಲ್ಲದೆ ಮನುಷ್ಯನ ಜೀವನದ ಅಂತ್ಯದ ನಂತರ ಚಿತಾಭಸ್ಮವನ್ನು ಸಹ ಪವಿತ್ರ ಜಲದಲ್ಲಿ ವಿಸರ್ಜಿಸುವುದು ಸಂಪ್ರದಾಯ. ಹಾಗೆ ನೋಡಿದಾಗ ಇಹದಲ್ಲಿ ಮಾತ್ರವಲ್ಲದೆ ಮೋಕ್ಷ ಸಾಧನೆಗೂ ನಾವು ಅವಲಂಬಿಸಿರುವುದು ಪವಿತ್ರ ಜಲವನ್ನೇ ಸರಿ. ಪೂರ್ವಜರ ಮೋಕ್ಷ ಪ್ರಾಪ್ತಿಗಾಗಿ ಗಂಗೆಯನ್ನು ಭೂಮಿಗೆ ತರಲು ಭಗೀರಥ ಪಟ್ಟ ಪ್ರಯತ್ನ ನಮಗೆಲ್ಲ ತಿಳಿದೇ ಇದೆ. ಉಷಃ ಕಾಲದಲ್ಲಿ ಸೂರ್ಯ ದೇವರಿಗೆ ಜಲದ ಅರ್ಘ್ಯವನ್ನು ನೀಡದೆ ಆಹಾರ ಸೇವನೆ ಮಾಡದೇ ಇರುವ ಎಷ್ಟೋ ಜನ ಇಂದಿಗೂ ನಮ್ಮ ನಡುವೆ ಇದ್ದಾರೆ. ದೇಶದ ಅನೇಕ ಪುಣ್ಯಕ್ಷೇತ್ರಗಳಲ್ಲಿ ಪವಿತ್ರ ಜಲಕ್ಕೆ ಪ್ರಾತಃ ಮತ್ತು ಸಂಧ್ಯಾ ಕಾಲದಲ್ಲಿ ಆರತಿ ಮಾಡುವ ಸಂಪ್ರದಾಯಗಳಿವೆ. ಕಾರ್ತಿಕ ಮಾಸದಲ್ಲಿ ಆಚರಿಸುವ ಗಂಗಾಷ್ಟಮಿಯAತಹ ಹಬ್ಬಗಳು ಪ್ರತಿಯೊಬ್ಬರೂ ಬಳಸುವ ನೀರನ್ನು ಗಂಗಾಮಾತೆ ಎಂದು ಪೂಜಿಸಿ ಜಲಕ್ಕೆ ಕೃತಜ್ಞತಾ ಭಾವ ಸಮರ್ಪಿಸುವ ಹಬ್ಬವೇ ಆಗಿದೆ. ಅಂದರೆ ನಮ್ಮ ಸಂಸ್ಕೃತಿಯ ಕಣಕಣದಲ್ಲೂ ಜಲದ ಸಂರಕ್ಷಣೆ ಬಗ್ಗೆ ಸಾಂಕೇತಿಕವಾಗಿ ಹೇಳಲಾಗಿದೆ. ಇಂತಹ ಶ್ರೇಷ್ಠ ಸಂಸ್ಕೃತಿಯ ವಾರಸುದಾರರಾದ ನಾವು ಜಲ ಸಂರಕ್ಷಣೆಗೆ ಎಷ್ಟು ಆದ್ಯತೆ ನೀಡುತ್ತಿದ್ದೇವೆ ಎಂದು ಅಂತರಾವಲೋಕನ ಮಾಡಿಕೊಳ್ಳಬೇಕಾಗಿದೆ. ಅವಶ್ಯಕತೆಗೆ ಮೀರಿ ಜಲವನ್ನು ಬಳಸುವುದು ಸಹ ಒಂದು ಅಪರಾಧವೆಯಾಗಿದೆ. ಕಾರ್ಖಾನೆಗಳಿಂದ ಜಲಮೂಲಗಳು ಮಲಿನವಾಗುತ್ತಿದೆ, ಕೊಳವೆ ಬಾವಿಗಳಿಂದ ಅಂತರ್ಜಲದ ಮಟ್ಟ ಕಡಿಮೆಯಾಗುತ್ತಿದೆ ಎಂಬ ಮಾತು ಎಷ್ಟು ಸತ್ಯವೋ ಜಲ ಮಾಲಿನ್ಯಕ್ಕೆ ಪ್ರತಿ ಮನುಷ್ಯನೂ ಹೊಣೆ ಎಂಬುದು ಸಹ ಅಷ್ಟೇ ಸತ್ಯ. ದಿನ ಬೆಳಗಾದರೆ ನಾವು ಮನೆಗಳಲ್ಲಿ ಬಳಸುವ ಹಲ್ಲುಜ್ಜುವ ಪೇಸ್ಟ್, ಸಾಬುನು, ಶ್ಯಾಂಪೂ ಕಂಡೀಷನರ್ ಎಲ್ಲಾ ಮಾರ್ಜಕಗಳು, ಪಾತ್ರೆ ತೊಳೆಯಲು ಬಟ್ಟೆ ತೊಳೆಯಲು ಬಳಸುವ ಎಲ್ಲ ರಾಸಾಯನಿಕಗಳು ಅಂತಿಮವಾಗಿ ಜಲಮೂಲವನ್ನೇ ಸೇರುತ್ತವೆ, ಹಾಗಾಗಿ ಪರೋಕ್ಷವಾಗಿ ಪ್ರತಿಯೊಬ್ಬರೂ ಜಲವನ್ನು ಮಲಿನ ಮಾಡುತ್ತಿದ್ದೇವೆ. ಹಾಗಾದರೆ ಇವುಗಳ ಬಳಕೆ ಇಲ್ಲದೆ ನಾವು ಬದುಕಬೇಕೆ ಎಂಬ ಪ್ರಶ್ನೆ ಮೂಡಬಹುದು. ಆದರೆ ರಾಸಾಯನಿಕ ಯುಕ್ತ ಪದಾರ್ಥಗಳಿಗೆ ಪರ್ಯಾಯವಾಗಿ ನೈಸರ್ಗಿಕ ಉತ್ಪನ್ನಗಳನ್ನು ರಾಸಾಯನಿಕ ರಹಿತ ಉತ್ಪನ್ನಗಳ ಬಳಕೆ ಮಾಡಬೇಕು. ದಿನನಿತ್ಯ ಜೀವನದಲ್ಲಿ ನೀರಿನಲ್ಲಿ ಲಭ್ಯತೆ ಸಾಕಷ್ಟು ಇದೆ ಎನ್ನುವ ಕಾರಣಕ್ಕೆ ಅನಗತ್ಯವಾಗಿ ನೀರಿನ ಬಳಕೆ ಮಾಡುವುದು ಎಷ್ಟು ಸರಿ? ಕೇವಲ ಒಂದು ಬಕೆಟ್‌ನಲ್ಲಿ ಸ್ನಾನ ಮಾಡಲು ಸಾಧ್ಯವಿದ್ದರೂ ಅನಗತ್ಯವಾಗಿ ನೀರು ಪೋಲು ಮಾಡುವುದು ಇತ್ತೀಚಿಗಿನ ಅಭ್ಯಾಸವಾಗಿಬಿಟ್ಟಿದೆ. ಹಲ್ಲುಜ್ಜುವಾಗ ಹರಿಯಲು ಪ್ರಾರಂಭಿಸಿದ ಎಷ್ಟೋ ಕೊಳಾಯಿಯ ನೀರು ಹಲ್ಲುಜ್ಜಿ ಮುಗಿಯುವತನಕ ಅನಾವಶ್ಯಕವಾಗಿ ಹರಿಯುತ್ತಿರುತ್ತದೆ. ಕೊಳಾಯಿಗಳು ಸೋರುತ್ತಿದ್ದರೆ ಪೋಲಾಗುತ್ತಿರುವುದು ಕೇವಲ ಒಂದು ಹನಿ ತಾನೆ ಎನ್ನುವ ತಾತ್ಸಾರ ಸಾವಿರಾರು ಲೀಟರ್ ನಷ್ಟು ನೀರನ್ನು ವ್ಯರ್ಥ ಮಾಡುತ್ತದೆ. ಅಡಿಗೆ ಮಾಡುವಾಗ ತರಕಾರಿ ತೊಳೆದ ನೀರು, ಅಕ್ಕಿ ಬೇಳೆ ತೊಳೆದ ನೀರು ಇವುಗಳನ್ನು ಸಂಗ್ರಹಿಸಿ ಕೈತೋಟದ ಗಿಡಗಳಿಗೆ ಹಾಕುವುದು ಮನೆಯ ಅಂಗಳ ತೊಳೆಯುವಾಗ ಮತ್ತು ವಾಹನಗಳನ್ನ ತೊಳೆಯುವಾಗ ಕನಿಷ್ಠ ಪ್ರಮಾಣದ ನೀರನ್ನು ಮಾತ್ರ ಬಳಸುವುದು ಇಂತಹ ಚಿಕ್ಕ ಚಿಕ್ಕ ವೈಯಕ್ತಿಕ ಬದಲಾವಣೆಗಳು ಸಹ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ. ಅಂತರ್ಜಲ ಹೆಚ್ಚಿಸಲು ಇಂಗುಗುAಡಿ ಮತ್ತು ನೀರಿನ ಉಳಿಕೆಗೆ ಮಳೆನೀರು ಕೊಯ್ಲು ಸಹ ಪ್ರತಿಯೊಬ್ಬರೂ ಮಾಡಬಹುದಾಗಿದೆ. ನೀರಿನ ಕೊಳಾಯಿಗಳಿಗೆ ಎರೇಟರ್ ಎಂಬ ಚಿಕ್ಕ ಉಪಕರಣ ಅಳವಡಿಸಿದರೆ ಪ್ರತಿ ಮನೆಯಲ್ಲೂ ದಿನ ಬಳಕೆ ೫೦% ನೀರನ್ನು ಉಳಿಸಬಹುದಾಗಿದೆ. ಜಲ ಕ್ಷಾಮಕ್ಕೆ ಅಥವಾ ಜಲ ಮಾಲಿನ್ಯಕ್ಕೆ ನಾನೊಬ್ಬ ಮಾಡಿದರೆ ಏನು ಪ್ರಯೋಜನ ಎನ್ನುವ ಮನೋಭಾವಕ್ಕಿಂತ ಪವಿತ್ರ ಜೀವ ಜಲದ ಸಂರಕ್ಷಣೆಗೆ ನನ್ನ ಪಾತ್ರ ಏನು ಎಂಬ ಸದ್ಭಾವನೆ ಎಲ್ಲರಲ್ಲೂ ಜಾಗೃತಗೊಳ್ಳಬೇಕಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈಗಿನಷ್ಟು ಯಥೇಚ್ಛವಾಗಿ ಕೊಳವೆ ಬಾವಿ ಉಪಲಬ್ಧತೆ ಇಲ್ಲದ ಸಮಯದಲ್ಲಿ ಬಾವಿಯಿಂದ ನೀರನ್ನು ಸೇದಿ ತರುವ ಅಥವಾ ಕೆರೆಗಳಿಂದ ನೀರನ್ನು ಹೊತ್ತು ತರುವ ಸಂದರ್ಭಗಳಲ್ಲಿ ನೀರನ್ನು ಅತ್ಯಂತ ಜಾಗರೂಕತೆಯಿಂದ ಬಳಸುತ್ತಿದ್ದರು. ಆದರೆ ಈಗ ಅಂತರ್ಜಲ ಮಟ್ಟವನ್ನು ಕುಗ್ಗಿಸುವ ಕೊಳವೆ ಬಾವಿಗಳದ್ದೇ ಕಾರುಬಾರು, ಹಾಗಾಗಿ ನೀರಿನ ಬಳಕೆಗೆ ಕಡಿವಾಣವೇ ಇಲ್ಲದಂತಾಗಿದೆ. ಇಲ್ಲಿ ಕೂಡ ವಾಸ್ತವಿಕತೆಯ ಜಾಗೃತಿ ಅತ್ಯಂತ ಅವಶ್ಯವಾಗಿದೆ. ಕಾಡುಗಳನ್ನು ನದಿಯ ತಾಯಿ ಎಂದು ಹೇಳಲಾಗಿದೆ ಎಂದು ಕಾಡು ನಾಶವಾಗುತ್ತಿರುವ ಕಾರಣ ಬಿದ್ದ ಮಳೆ ನೀರು ಭೂಮಿಯಲ್ಲಿ ಇಂಗದೆ ಹರಿದು ಹೋಗುತ್ತಿರುವುದು ಅಂತರ್ಜಲದ ಕುಸಿತಕ್ಕೆ ಕಾರಣವಾಗಿದೆ ಹಾಗಾಗಿ ಪ್ರತಿಯೊಬ್ಬರೂ ಕನಿಷ್ಠ ೫ ಗಿಡವನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ಅವುಗಳ ಪೋಷಣೆ ಮಾಡಿ ಪರಿಸರಕ್ಕೆ ಚಿಕ್ಕ ಕೊಡುಗೆಯನ್ನು ಕೊಡಬಹುದು. ಸಮಾನಚಿತ್ತರ ಗುಂಪು ರಚಿಸಿ ಜಲಮೂಲಗಳ ಕಲ್ಯಾಣಿಗಳ ಸ್ವಚ್ಛತೆಗೆ ಶ್ರಮದಾನ ಮಾಡುವ ಮೂಲಕ ಸಹ ಜೀವ ಜಲಕ್ಕೆ ಗೌರವ ಸಲ್ಲಿಸಬಹುದು. ನಮ್ಮ ವೇದ ಉಪನಿಷತ್ ಪುರಾಣಗಳಲ್ಲಿ ಜಲಕ್ಕೆ ಸಂಬAಧಿಸಿ ಉಲ್ಲೇಖಿಸಿರುವ ಎಲ್ಲಾ ವಿಷಯಗಳು, ನೀರಿಗೆ ಸಂಬAಧಿಸಿದ ನಮ್ಮ ಹಬ್ಬಗಳು ಕೇವಲ ಸಂಪ್ರದಾಯಕ್ಕೆ ಸೀಮಿತವಾಗಿರದೆ ಅದರ ತಾತ್ಪರ್ಯಯುತ ಅನುಷ್ಠಾನಕ್ಕೆ ಬಂದರೆ ಜಲದ ಪ್ರತಿ ಹನಿ ಹನಿಯೂ ಪಾವನ ತೀರ್ಥವೇ ಸರಿ. ನದಿಯ ಹರಿವನು ತಡೆದರೆ ಬಾಯಾರಿಕೆಯು ಹರಿವ ತೋಡು ಮುಚ್ಚಿದರೆ ಜೀವಕ್ಕಿಷ್ಟು ಕಹಿ ಹರಿವು ಶುದ್ದಗೊಳಿಸೋ ಸಜ್ಜನ ಕಾರ್ಯ ಜಲಜೀವನ ಶ್ರೇಯ ಮಂಕುತಿಮ್ಮ ಎನ್ನುವ ಡಿವಿಜಿ ಅವರ ಕಗ್ಗ ಜಲ ಸಾಕ್ಷರರಾಗಲು ಸರ್ವರನ್ನು ಪ್ರೇರೇಪಿಸಲಿ. ಬಾಕ್ಸ್ ನೀರನ್ನು ಉಳಿಸಲು ನಾವೇನು ಮಾಡಬೇಕು? ೧. ನೀರನ್ನು ಮಿತವಾಗಿ ಬಳಸುವುದು. ಮನೆಯಲ್ಲಿ ನಲ್ಲಿ, ಪೈಪ್‌ಗಳು ಕೆಟ್ಟುಹೋಗಿ ನೀರು ಪೋಲಾಗುತ್ತಿದ್ದರೆ ತಕ್ಷಣ ದುರಸ್ತಿ ಮಾಡುವುದು. ಇಂದಿನ ದಿನಗಳಲ್ಲಿ ಒಂದೊAದು ಹನಿಯೂ ಅತ್ಯಮೂಲ್ಯ. ೨. ವಾಹನಗಳನ್ನು ತೊಳೆಯಲು ನೀರಿನ ಪೈಪನ್ನು ಬಳಸದೆ ಬಕೆಟ್ಟಿನಲ್ಲಿ ನೀರು ತೆಗೆದುಕೊಂಡು ತೊಳೆಯುವುದು. ಇದರಿಂದ ನೀರಿನ ಅತಿ ಪೋಲು ಕಡಮೆಯಾಗುತ್ತದೆ. ೩. ಕಡ್ಡಾಯವಾಗಿ ಪ್ರತಿ ಕಟ್ಟಡ-ಮನೆಗಳಲ್ಲಿ ಮಳೆನೀರು ಕೊಯ್ಲು ಅಳವಡಿಸುವುದು. ೪. ಕೆರೆ, ನದಿಗಳ ಮೂಲ ಮಲಿನವಾಗದಂತೆ ಎಚ್ಚರವಹಿಸುವುದು. ೫. ಸಭೆ, ಸಮಾರಂಭಗಳಲ್ಲಿ ಹೆಚ್ಚು ನೀರು ಪೋಲಾಗದಂತೆ ಜಾಗ್ರತೆ ವಹಿಸುವುದು. ಕಾರ್ಯಾಗಾರಗಳನ್ನು ಹಮ್ಮಿಕೊಂಡು ನೀರಿನ ಸದ್ಬಳಕೆ ಬಗ್ಗೆ ತಿಳಿಸುವುದು. ೬. ಪ್ರಕೃತಿ, ಪರಿಸರದ ರಕ್ಷಣೆಗೆ ಒತ್ತುನೀಡುವುದು. ೭. ಬಟ್ಟೆ ಒಗೆದ ನಂತರ ಆ ನೀರನ್ನು ಚೆಲ್ಲದೆ ಹೂವಿನ ಗಿಡಗಳಿಗೋ, ಅಂಗಳವನ್ನು ತೊಳೆಯಲಿಕ್ಕೋ ಉಪಯೋಗಿಸಬಹುದು. ೮. ಮಕ್ಕಳಿಗೆ ಬಾಲ್ಯದಲ್ಲೇ ನೀರಿನ ಸಂರಕ್ಷಣೆ ಮತ್ತು ಮಿತಬಳಕೆಯ ಬಗ್ಗೆ ಅರಿವು ಮೂಡಿಸುವುದು. ೯. ವ್ಯರ್ಥವಾಗಿ ಹರಿದುಹೋಗುವ ನೀರನ್ನು ಮರುಸಂಸ್ಕರಿಸಿ ಇತರ ಉಪಯೋಗಗಳಿಗೆ ಬಳಸಿಕೊಳ್ಳುವ ಯೋಜನೆಗಳತ್ತ ಗಮನ ಹರಿಸುವುದು. ೧೦. ನೀರಿನ ಬಳಕೆಯ ಬಗೆಗಿನ ಜಾಗೃತಿಗಾಗಿ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು. ಸಹನಾ ಹೆಗಡೆ