ಸುಮಾರು ೨೩೦ ವರ್ಷಗಳ ಕಾಲ ತಮ್ಮ ಸಾಮ್ರಾಜ್ಯದ ಚತುಃಸೀಮೆಯೊಳಗೆ ಯಾವ ಆಕ್ರಮಣಕಾರಿಯನ್ನೂ ಬರಗೊಡದೆ ಅಜೇಯವಾಗಿ ರಾಜ್ಯಭಾರ ನಡೆಸಿದ ವಿಜಯನಗರ ಸಾಮ್ರಾಜ್ಯ ೧೫೬೫ರ ರಕ್ಕಸ ತಂಗಡಿ ಯುದ್ಧದಲ್ಲಿ ಸೋಲುಪ್ಪಿಕೊಂಡು ಪತನದ ಅಂಚಿನಲ್ಲಿತ್ತು. ವಿಜಯನಗರದ ಸಾಮರ್ಥ್ಯ ಕುಂದಿದೆ ಎಂದು ತಿಳಿಯುತ್ತಿದ್ದಂತೆ ಅಲ್ಲಿಯವರೆಗೆ ಬಾಲ ಮುದುರಿಕೊಂಡಿದ್ದ ಆಕ್ರಮಣಕಾರಿಗಳು ಮತ್ತೆ ಚಿಗುರಿದರು. ವ್ಯಾಪಾರಕ್ಕೆಂದು ಬಂದಿದ್ದ ಪೋರ್ಚುಗೀಸರು ಗೋವಾದಲ್ಲಿ ನೆಲೆಯೂರಿ ಕರ್ನಾಟಕದ ಕರಾವಳಿಯಲ್ಲಿ ಲೂಟಿ ಆರಂಭ ಮಾಡಿದರು. ಬಸ್ರೂರು, ಬಾರ್ಕೂರು, ಮಂಗಳೂರು ಸಹಿತವಾಗಿ ಕರಾವಳಿಯ ಬಂದರುಗಳನ್ನು ಸಂಪೂರ್ಣ ತಮ್ಮ ವಶಕ್ಕೆ ತೆಗೆದುಕೊಂಡರು. ತಮ್ಮನ್ನು ಒಪ್ಪದವರನ್ನು ಅತ್ಯಂತ ಕ್ರೂರವಾಗಿ ಹಿಂಸಿಸಿದರು, ಅಸಂಖ್ಯ ಅಂಗಡಿ, ಮನೆಗಳಿಗೆ, ತೆಂಗಿನ ತೋಟಗಳಿಗೆ ಬೆಂಕಿ ಇಟ್ಟರು. ಇಲ್ಲಿನ ತಾಮ್ರ, ಬೆಲೆ ಬಾಳುವ ಮಣಿಗಳು, ಪಾದರಸ, ಕರಿಮೆಣಸು ಏಲಕ್ಕಿ ಮುಂತಾದ ಸಾಂಬಾರ ಪದಾರ್ಥಗಳು ಎಲ್ಲವನ್ನೂ ಮನಸೋ ಇಚ್ಚೆ ದೋಚಿದರು. ಬಂದರಿನಲ್ಲಿದ್ದ ನಮ್ಮವರ ಹಡಗುಗಳನ್ನು ಮುಳುಗಿಸಿದರು. (ಸಮಕಾಲಿನ ಪೋರ್ಚುಗೀಸ್ ಇತಿಹಾಸಕಾರ ಕ್ಯಾಸ್ಟಾನಿಡಾ ಈ ಎಲ್ಲಾ ಘಟನೆಗಳನ್ನು ಸವಿವರವಾಗಿ ದಾಖಲಿಸಿದ್ದಾರೆ.) ಗೋವಾದಿಂದ ಉಳ್ಳಾಲದ ತನಕ ಕರಾವಳಿಯನ್ನು ಸಂಪೂರ್ಣವಾಗಿ ತಮ್ಮ ಹಿಡಿತದಲ್ಲಿರಿಸಿಕೊಂಡು, ಸಮುದ್ರದಲ್ಲಿನ ಯಾವುದೇ ಚಟುವಟಿಕೆಗೆ ಪೋರ್ಚುಗೀಸರಿಂದ ಅನುಮತಿ ಪಡೆಯಬೇಕಾದ ಅನಿವಾರ್ಯತೆ ನಮ್ಮವರದ್ದಾಯಿತು, ಉಳಿದ ಆಳರಸರು ಆಕ್ರಮಕರ ಕಾರ್ಯಗಳಿಗೆ ತಲೆಬಾಗಿ ಭಾರತೀಯರ ಮೇಲೆ ಅವರ ದೌರ್ಜನ್ಯಗಳನ್ನು ಕಂಡೂ ಕಾಣದಂತಿದ್ದು, ಕಾಲಕಾಲಕ್ಕೆ ಕಪ್ಪವನ್ನು ತಪ್ಪದೆ ನೀಡುತ್ತಾ ತೆಪ್ಪಗಿದ್ದ ಸಂದರ್ಭದಲ್ಲಿ, ಬೆಂಕಿಯ ಚೆಂಡಿನAತೆ ಪೋರ್ಚುಗೀಸರ ಹಡಗುಗಳಿಗೆ ಬೆಂಕಿ ಹಚ್ಚಿ ಅಧರ್ಮಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಭಾರತದ ಮೊದಲ ಸ್ವಾತಂತ್ರ‍್ಯ ಹೋರಾಟಗಾರ್ತಿ ಉಳ್ಳಾಲದ ವೀರರಾಣಿ ಅಬ್ಬಕ್ಕ. ೧೫ನೇ ಶತಮಾನದವರೆಗೂ ಉತ್ತರದ ಅಂಕೋಲಾ ನದಿಯಿಂದ ದಕ್ಷಿಣದ ಕಾಸರಗೋಡಿನ ಪಯಸ್ವಿನಿ ನದಿಯ ತನಕ, ಸಮುದ್ರ ತಟದಿಂದ ಸಹ್ಯಾದ್ರಿ ಅಂಚಿನವರೆಗಿನ ಪ್ರದೇಶವನ್ನು ತುಳುನಾಡು ಎಂದೇ ಕರೆಯಲಾಗುತ್ತಿತ್ತು. ತನ್ನದೇ ಆದ ವೈಶಿಷ್ಟ್ಯ ಪೂರ್ಣ ರಾಜಕೀಯ, ಸಾಂಸ್ಕೃತಿಕ ಪರಂಪರೆಗಳಿದ್ದ ಪ್ರದೇಶ ಈ ತುಳುನಾಡು. “ಪುರುಷರು ಮಾತ್ರ ರಾಜ್ಯವಾಳಬೇಕಾದವರು, ಅಕಸ್ಮಾತ್ ಗಂಡು ಸಂತಾನವಿಲ್ಲದಿದ್ದರೆ ಆ ರಾಜ್ಯಕ್ಕೆ ಭವಿಷ್ಯವೇ ಇಲ್ಲ” ಅನ್ನುವ ಮಾನಸಿಕತೆಯಲ್ಲಿ ಯುರೋಪಿನಂತಹ ಮುಂದುವರಿದ ದೇಶಗಳಿದ್ದಾಗ, ಅಳಿಯ ಸಂತಾನ ಕಟ್ಟಿನ ಸಂಪ್ರದಾಯದAತೆ ಸ್ತಿçÃಯರಿಗೂ ಪಟ್ಟ ಕಟ್ಟಿ ಅವರ ಶೌರ್ಯವನ್ನು ಒರೆಗಲ್ಲಿಗೆ ಹಚ್ಚಿ, ಭಾರತೀಯ ನಾರಿಯರ ಪರಾಕ್ರಮವನ್ನು ಜಗತ್ತಿಗೆ ತಿಳಿಯಪಡಿಸಿದ ವಿಶಿಷ್ಟ ಸಂಪ್ರದಾಯ ತುಳುನಾಡಿನದ್ದು. ಅಬ್ಬಕ್ಕ ತುಳುನಾಡನ್ನು ಆಳುತ್ತಿದ್ದ ಚೌಟ ವಂಶಕ್ಕೆ ಸೇರಿದವಳು. ಅಹಿಂಸಾ ಪರಮೋ ಧರ್ಮಃ ಎನ್ನುವ ಜೈನ ಮತವನ್ನು ಅನುಸರಿಸುವವಳಾಗಿದ್ದರೂ, ಧರ್ಮ ಹಿಂಸಾ ತಥೈವ ಚ ಎನ್ನುತ್ತಾ ರಾಷ್ಟç ರಕ್ಷಣೆಗಾಗಿ ಕತ್ತಿಯನ್ನು ಹಿಡಿದು ಭಾರತೀಯ ಸಂಸ್ಕೃತಿಯನ್ನು ಮೆರೆದವಳು. ಚೌಟರ ಅರಸು ಮನೆತನದಲ್ಲಿ ಅಬ್ಬಕ್ಕ ಹೆಸರಿನ ನಾಲ್ವರು ಆಳಿದ ದಾಖಲೆಗಳು ಇರುವುದರಿಂದ ಈಕೆಯನ್ನು ಹಿರಿಯ ಅಬ್ಬಕ್ಕಳೆಂದೇ ಇತಿಹಾಸಕಾರರು ಗುರುತಿಸುತ್ತಾರೆ. ಈಕೆ ಉಳ್ಳಾಲವನ್ನು ಆಳಿದ್ದು ೧೫೫೪ರಿಂದ ೧೫೮೮ರವರೆಗೆ. ಅಬ್ಬಕ್ಕ ಪಟ್ಟಕ್ಕೆ ಬರುವ ಮೊದಲೇ ಯುದ್ಧ ಕೌಶಲ್ಯಗಳು, ಆಡಳಿತ ತರಬೇತಿಯನ್ನು ಹೊಂದಿದ್ದಳು ಜೊತೆಗೆ ಉತ್ತಮ ರೀತಿಯಲ್ಲಿ ಶಾಸ್ತಾçಭ್ಯಾಸವನ್ನು ಕೂಡ ಮಾಡಿದ್ದಳು. ಮಾತ್ರವಲ್ಲದೆ ಸಂಗೀತ ಹಾಗೂ ಸಾಹಿತ್ಯಗಳಲ್ಲಿ ಅಬ್ಬಕ್ಕಳಿಗೆ ಅಪಾರ ಅಭಿರುಚಿ ಇತ್ತು ಎಂಬುದನ್ನು ಪೋರ್ಚುಗೀಸ್ ಇತಿಹಾಸಕಾರರು ತಮ್ಮ ಬರವಣಿಗೆಯಿಂದ ತಿಳಿಯಪಡಿಸುತ್ತಾರೆ. ಅರಬ್ಬರು, ಕಲ್ಲಿಕೋಟೆಯ ಸಾಮುದ್ರಿ ಅರಸ(ಜಾಮೋರಿನ್) ಮುಂತಾದವರ ಜೊತೆ ವ್ಯಾವಹಾರಿಕ ಒಪ್ಪಂದವನ್ನು ಮಾಡಿಕೊಂಡಿದ್ದ ರಾಣಿ ಅಬ್ಬಕ್ಕ ಆ ಕಾಲದಲ್ಲಿಯೇ ಸಾಗರೋತ್ತರ ವ್ಯವಹಾರಗಳನ್ನು ನಡೆಸಿದ್ದಳು. ಆದರೆ ಕರ್ನಾಟಕ ಕರಾವಳಿಯಲ್ಲಿ ನಮ್ಮ ಅಧಿಪತ್ಯವಿರುವುದರಿಂದ ನಮ್ಮ ಅನುಮತಿ ಇಲ್ಲದೆ ಉಳ್ಳಾಲದ ರಾಣಿ ನಡೆಸುತ್ತಿರುವ ವ್ಯವಹಾರ ಪೋರ್ಚುಗೀಸರನ್ನು ಕೆರಳಿಸಿತು. ಅಬ್ಬಕ್ಕಳಿಗೆ ಎಚ್ಚರಿಕೆ ನೀಡಿದರು. ಅವರ ಕಾನೂನೂಗಳಿಗೆ ಕ್ಯಾರೇ ಅನ್ನದ ಅಬ್ಬಕ್ಕ “ಬೆಳೆ ನನ್ನ ದೇಶದ್ದು, ಬೆಳೆದವರು ನನ್ನ ದೇಶದ ರೈತರು, ಸಮುದ್ರ ನನ್ನ ದೇಶದ್ದು. ಇಲ್ಲಿ ವ್ಯವಹಾರ ಮಾಡುವುದಕ್ಕೆ ಎಲ್ಲಿಂದಲೋ ಬಂದ ದರೋಡೆಕೋರರ ಅನುಮತಿ ನಾನು ಪಡೆದುಕೊಳ್ಳಬೇಕೇ? ಸಾಧ್ಯವಿಲ್ಲ” ಎಂದು ದಿಟ್ಟತನದಿಂದ ಉತ್ತರ ನೀಡಿದ್ದಳು. ಪೋರ್ಚುಗೀಸರಿಂದ ಬರಬಹುದಾದ ಅಪಾಯವನ್ನು ತಡೆಗಟ್ಟಲು ಮತ್ತು ಅವರನ್ನು ಸಂಪೂರ್ಣ ಮಟ್ಟ ಹಾಕಲು ಅಬ್ಬಕ್ಕ ಸಂಪೂರ್ಣ ಸಿದ್ಧತೆಯನ್ನು ನಡೆಸಿದಳು. ಮೀನುಗಾರ ಸಮಾಜದ ಉಳ್ಳಾಲದ ಚನ್ನಪ್ಪ ಗುರಿಕಾರ ರಾಣಿ ಅಬ್ಬಕ್ಕಳ ನೌಕಾದಾಳದ ಮುಖ್ಯ ಅಧಿಕಾರಿಯಾಗಿದ್ದ ಕಾರಣ ಅಪಾರ ಸಂಖ್ಯೆಯಲ್ಲಿ ಮೀನುಗಾರ ಸಮಾಜದ ಯುವಕರು ಅಬ್ಬಕ್ಕನ ಸೈನ್ಯವನ್ನು ಸೇರಿಕೊಳ್ಳುವುದು ಸಾಧ್ಯವಾಯಿತು. ಜೊತೆಗೆ ಕರಾವಳಿಯ ಬಿಲ್ಲವರು ಬಂಟರು ಮಾಪಿಳ್ಳೆಗಳು ಅಬ್ಬಕ್ಕನ ಸೈನ್ಯವನ್ನು ಸೇರಿ ಆಕೆಯ ಸೈನ್ಯದ ಶಕ್ತಿಯನ್ನು ಮತ್ತಷ್ಟು ಸಮರ್ಥವಾಗಿಸಿದ್ದರು. ಪೋರ್ಚುಗೀಸರಿಂದ ಸಂಭಾವ್ಯವಾದ ದಾಳಿಯನ್ನು ಊಹಿಸಿದ ಅಬ್ಬಕ್ಕ ಉಳ್ಳಾಲದಲ್ಲಿ ಅಭೇದ್ಯವಾದ ಕೋಟೆಯನ್ನು ನಿರ್ಮಿಸಿ ಅದರ ಮೇಲೆ ಫಿರಂಗಿಗಳನ್ನು ಸನ್ನದ್ಧವಾಗಿರಿಸಿದ್ದಳು. ರಾಣಿ ಅಬ್ಬಕ್ಕ ಅಷ್ಟು ಸುಲಭದಲ್ಲಿ ಬಗ್ಗುವವಳಲ್ಲವೆಂದು ಮೊದಲೇ ಅರಿತಿದ್ದ ಆಗಿನ ಪೋರ್ಚುಗೀಸ್ ವೈಸರಾಯ್ ೧೫೫೫ ರಲ್ಲಿ ತನ್ನ ಅತ್ಯಂತ ಸಮರ್ಥ ಅಡ್ಮಿರಲ್ ಡೋಮ್ ಅಲ್ವೇರೋ ಡ ಸಿಲ್ವೇರ ನೇತೃತ್ವದಲ್ಲಿ ೨೧ ಯುದ್ಧ ನೌಕೆಗಳನ್ನು ಮಂಗಳೂರಿಗೆ ಕಳುಹಿಸುತ್ತಾನೆ. ಆರಂಭವಾಯಿತು ಮಂಗಳೂರಿನಲ್ಲಿ ಪೋರ್ಚುಗೀಸರಿಂದ ನರಮೇಧ. ಉಳ್ಳಾಲದ ಸೋಮೇಶ್ವರ ದೇವಸ್ಥಾನದ ಮೇಲೂ ಬರ್ಬರ ದಾಳಿಯಾಯಿತು. ಅಬ್ಬಕ್ಕ ತಡಮಾಡಲಿಲ್ಲ. ಪೋರ್ಚುಗೀಸರೇ ಬೆಚ್ಚಿಬೀಳುವಂತಹ ಪ್ರತ್ಯಘಾತಗಳು ಆರಂಭವಾದವು. ತೆಂಗಿನ ಗರಿಗಳಿಂದ ತಯಾರು ಮಾಡಿದ ಸೂಟೆಗಳು (ದೊಂದಿಗಳು), ತೆಂಗಿನ ಗೆರೆಟೆಯೊಳಗೆ ಕೋವಿಯ ಮದ್ದನ್ನ ತುಂಬಿಸಿ ತಯಾರಿಸಿದ ಬಾಂಬುಗಳು, ಪುಂಖಾನುಪುAಖವಾಗಿ ಬರುತ್ತಿದ್ದ ಬೆಂಕಿಯ ಬಾಣಗಳಿಂದ, ಗೆರಟೆ ಬಾಂಬುಗಳಿAದ ಪೋರ್ಚುಗೀಸರು ತತ್ತರಿಸಿ ಹೋದರು. ಅನೇಕರು ಪ್ರಾಣ ಕಳೆದುಕೊಂಡರು ಪ್ರಾಣ ಉಳಿಸಿಕೊಂಡವರ ಮುಖ ಮೂತಿಗಳು ಸುಟ್ಟುಹೋದವು ಯುದ್ಧಕ್ಕೆ ಬಂದಿದ್ದ ಆ ೨೧ ಹಡಗುಗಳು ಕೂಡ ಸಂಪೂರ್ಣ ಸುಟ್ಟು ಬೂದಿಯಾದವು. ಸಾಕಷ್ಟು ಸಾವು ನೋವುಗಳು ಆಗುತ್ತಿರುವುದನ್ನು ಕಂಡು ಕಲ್ಲಿಕೋಟೆಯ ದೊರೆ ಸಾಮುದ್ರಿ ಅರಸ ಮಧ್ಯಸ್ಥಿಕೆ ವಹಿಸಿ ಸಂಧಾನ ಮಾಡಿ ಯುದ್ದವನ್ನು ನಿಲ್ಲಿಸಿದ. ಅಬ್ಬಕ್ಕ ಮತ್ತವಳ ಸೈನ್ಯದ ವೀರಾವೇಶವನ್ನು ಜೀರ್ಣಿಸಿಕೊಳ್ಳಲು ಪೋರ್ಚುಗೀಸರಿಗೆ ಬರೋಬ್ಬರಿ ಎರಡು ವರ್ಷಗಳೇ ಬೇಕಾಯಿತು. ಆದರೆ ಹೊನ್ನು ಮಣ್ಣು ಮತ್ತು ಅಧಿಕಾರದ ಆಸೆಯಿಂದ ಮತ್ತೆ ೧೫೫೭ರಲ್ಲಿ ಮತ್ತೊಮ್ಮೆ ಕಾಲು ಕೆರೆದು ಯುದ್ಧಕ್ಕೆ ಬಂದರು. ಆಗ ಪೋರ್ಚುಗೀಸರ ಮುಂದಾಳುವಾಗಿದ್ದವನು ಲೂಯಿಸ್ ಡಿ ಮೆಲ್ಲೋ. ಪರಕೀಯರ ನೌಕೆಗಳು ಉಳ್ಳಾಲಕ್ಕೆ ಬಂದು ಮುಟ್ಟುವ ಮೊದಲೇ ಅಬ್ಬಕ್ಕನ ಸೈನ್ಯ ಮತ್ತು ಕರಾವಳಿಯ ಮೀನುಗಾರರು ಪ್ರಬಲ ಪ್ರತ್ಯಾಘಾತಗಳನ್ನು ಒಡ್ಡಿದರು. ಮುಂದೆ ನಡೆದ ಭೀಕರ ಯುದ್ಧದ ಪರಿಣಾಮ ಸಮುದ್ರದ ಮೂಲಕ ನೌಕೆಯಲ್ಲಿ ಬಂದ ಆಕ್ರಮಣಕಾರಿಗಳು “ಬದುಕಿದರೆ ಬಾಳು” ಎಂಬAತೆ ರಸ್ತೆಗಳ ಮೂಲಕ ಗೋವಾಕ್ಕೆ ಪಲಾಯನ ಮಾಡಿದರು. ಮುಂದೆ ಹತ್ತು ವರ್ಷಗಳ ಕಾಲ ಉಳ್ಳಾಲದ ಕಡೆ ತಲೆಹಾಕಿಯೂ ಮಲಗಲಿಲ್ಲ ಪೋರ್ಚುಗೀಸರು. ಮತ್ತೆ ಪ್ರಾರಂಭವಾಯಿತು ಅಬ್ಬಕ್ಕನ ಅಜೇಯ ರಾಜ್ಯಭಾರ. ಒಂದೆಡೆ ಪೋರ್ಚುಗೀಸರಿಗೆ ಸಲ್ಲುತ್ತಿದ್ದ ಕಪ್ಪಕ್ಕೂ ಕಲ್ಲು ಬಿತ್ತು, ಮತ್ತೊಂದೆಡೆ ಅವರ ವೈರಿ ಕಲ್ಲಿಕೋಟೆಯ ದೊರೆ ಸಾಮುದ್ರಿ ಅರಸನ ಜೊತೆಗೆ ರಾಜಕೀಯ ಸಖ್ಯವನ್ನು ಬೆಳೆಸಿಕೊಂಡು ಅವನ ಹಡಗುಗಳ ಜೊತೆ ಪರ್ಷಿಯಾ, ಅರಬ್ ಮುಂತಾದ ದೇಶಗಳ ಜೊತೆ ವ್ಯಾಪಾರ ವ್ಯವಹಾರವನ್ನು ಪುನರಾರಂಭಿಸಿದಳು. ಭಾರತದ ಪಶ್ಚಿಮ ಸಮುದ್ರದಲ್ಲಿ ವ್ಯವಹಾರಕ್ಕೆ ಪೋರ್ಚುಗೀಸರು ವಿಧಿಸಿದ್ದ ಕರ್ತಾಜ್ (ಅಚಿಡಿಣಚಿz -ಸಮುದ್ರ ವ್ಯವಹಾರಗಳ ತೆರಿಗೆ)ಗೆ ಕವಡೆ ಕಿಮ್ಮತ್ತಿನ ಬೆಲೆಯೂ ಇಲ್ಲದಾಯಿತು. ಮತ್ತೆ ಬಂದರು ದಂಡೆತ್ತಿ ಪೋರ್ಚುಗೀಸರು. ಆ ಮೂರನೇ ಕದನದಲ್ಲಿ ಪೋರ್ಚುಗೀಸರ ಸೇನಾಧಿಕಾರಿಯಾಗಿದ್ದವ ಜಾವೋ ಪಿಕ್ಸಿವೋಟೋ. ರಾಣಿ ಅಬ್ಬಕ್ಕ ಎದೆ ಕವಚವನ್ನು ಧರಿಸಿ ಬಿಳಿ ಕುದುರೆಯ ಮೇಲೆ ಕುಳಿತು, ಸೈನಿಕರಲ್ಲಿ ಯುದ್ದೋತ್ಸಾಹವನ್ನು ತುಂಬುತ್ತಿದ್ದ ರೀತಿಯನ್ನು ಪೋರ್ಚುಗೀಸ್ ಇತಿಹಾಸಕಾರರಾದ ಕೂಟೊ ಮತ್ತು ಫ್ರಾನ್ಸಿಕೋ ಬಹಳವಾಗಿ ಮೆಚ್ಚಿ ದಾಖಲಿಸುತ್ತಾರೆ ಪೋರ್ಚುಗೀಸ್ ಸೈನಿಕರು ಉಳ್ಳಾಲವನ್ನು ಆಕ್ರಮಿಸಿದರು. ಕಂಡ ಕಂಡವರನ್ನು ಸುಟ್ಟರು, ಊರಿಗೆ ಬೆಂಕಿ ಇಟ್ಟರು, ಕ್ರೂರವಾಗಿ ಜನರನ್ನು ಹಿಂಸಿಸ ತೊಡಗಿದರು. ಈ ನಡುವೆ ‘ಉಳ್ಳಾಲದ ಕ್ರೆöÊಸ್ತ ಜೆಸ್ಯೂಟ್ ಪಾದ್ರಿಗಳು ಶಿಲುಬೆ ಹಿಡಿದುಕೊಂಡು ಪೋರ್ಚುಗೀಸ್ ಸೈನಿಕರಿಗೆ ಯುದ್ಧ ನಡೆಸುವಂತೆ ಪ್ಪ್ರೋತ್ಸಾಹಿಸುತ್ತಿದ್ದರು’ ಎಂಬ ಕರಾಳ ಸತ್ಯವನ್ನು ಖ್ಯಾತ ಇತಿಹಾಸಜ್ಞರಾದ ಡಾ.ಕೆ.ಜಿ. ವಸಂತ ಮಾಧವ ಅವರು ಅಬ್ಬಕ್ಕನ ಕುರಿತಾದ ತಮ್ಮ ಸಂಶೋಧನಾ ಗ್ರಂಥದಲ್ಲಿ ಅನಾವರಣಗೊಳಿಸುತ್ತಾರೆ. ಅಬ್ಬಕ್ಕ ಮತ್ತವಳ ಸೈನಿಕರು ಪೋರ್ಚುಗೀಸರಿಗೆ ಬಹಳ ಪ್ರಬಲವಾದ ಪ್ರತಿರೋಧವನ್ನು ತೋರಿದರು. ಅಪಾರವಾದ ಸಾವು ನೋವುಗಳು ಉಳ್ಳಾಲದಲ್ಲಿ ಸಂಭವಿಸುತ್ತಿರುವುದನ್ನು ಕಂಡು ಅಬ್ಬಕ್ಕ ಯುದ್ಧ ತಂತ್ರದ ಭಾಗವಾಗಿ ತನ್ನ ಸೈನಿಕರ ಜೊತೆ ಅಲ್ಲಿಂದ ತಪ್ಪಿಸಿಕೊಂಡು ಪಕ್ಕದ ಬೆಟ್ಟಗಳಲ್ಲಿ ತಲೆಮರಿಸಿಕೊಂಡಳು. ಇತ್ತ ಅಬ್ಬಕ್ಕ ಓಡಿ ಹೋದಳೆಂದು ಪೋರ್ಚುಗೀಸ್ ಸೈನಿಕರು ವಿಜಯೋನ್ಮಾದದಿಂದ ಕಂಠಪೂರ್ತಿ ಕುಡಿದು ತೂರಾಡುತ್ತಿದ್ದಾಗ ರಾತ್ರಿಯ ಹೊತ್ತು ಇದ್ದಕ್ಕಿದ್ದಂತೆ ಅಬ್ಬಕ್ಕ ತನ್ನ ಸೈನಿಕರೊಂದಿಗೆ ಸಿಂಹಿಣಿಯAತೆ ಎರಗುತ್ತಾಳೆ. ಸೇನಾಧಿಕಾರಿ ಜಾವೋ ಪಿಕ್ಸಿವೋಟೋ ಅಬ್ಬಕ್ಕನ ಅಬ್ಬರಕ್ಕೆ ಸಿಲುಕಿ ಇಹಲೋಕವನ್ನೇ ತ್ಯಜಿಸುತ್ತಾನೆ. ತಮ್ಮ ಸೇನಾಧಿಕಾರಿಯನ್ನು ಬರ್ಬರವಾಗಿ ಯಮಪುರಿಗಟ್ಟಿದ ಸುದ್ದಿ ತಿಳಿಯುತ್ತಿದ್ದಂತೆ ಪೋರ್ಚುಗೀಸ್ ಸೈನಿಕರು ಅರ್ಧ ದಾರಿಯಲ್ಲಿ ತಮ್ಮ ನೌಕೆಗಳನ್ನು ಗೋವೆಯತ್ತ ತಿರುಗಿಸಿ ಓಡಿದರು, ಅಸಂಖ್ಯ ಪೋರ್ಚುಗೀಸ ಸೈನಿಕರು ಸತ್ತು ಬಿದ್ದರು, ಬದುಕಿ ಉಳಿದವರು ಕಂಗಾಲಾಗಿ ವೈರಿಗಳು ಯಾರು ಎಂದು ತಿಳಿಯಲಾಗದೆ ತಮ್ಮವರಿಗೇ ಗುಂಡು ಹಾರಿಸಿಕೊಂಡರು. ೧೫೭೦ರ ಹೊತ್ತಿಗೆ ಪೋರ್ಚುಗೀಸರನ್ನ ಭಾರತದಿಂದ ಓಡಿಸಲು ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿ, ಕಲ್ಲಿಕೋಟೆಯ ಸಾಮುದ್ರಿ ಅರಸ ಮತ್ತಿತರರು ಸೇರಿ ಯೋಜನೆ ಸಿದ್ಧಪಡಿಸುವಾಗ ಛಲದ ಜ್ವಾಲೆಯಂತಿದ್ದ ರಾಣಿ ಅಬ್ಬಕ್ಕಳೂ ಅವರೊಂದಿಗೆ ಸೇರಿಕೊಳ್ಳುತ್ತಾಳೆ. ಪೋರ್ಚುಗೀಸರಿಗೆ ಮತ್ತಷ್ಟು ಸಂಕಟವಾಯಿತು. ಈ ನಡುವೆ ಮಲಬಾರ್ ನೌಕಾಧಿಕಾರಿ ಕುಟ್ಟಿ ಪೋಕರೆಯನ್ನು ಆಹ್ವಾನ ಮಾಡಿ “ಮಂಗಳೂರಿನಲ್ಲಿದ್ದ ಪೋರ್ಚುಗೀಸರ ಕೋಟೆಯನ್ನು ವಶಪಡಿಸಿಕೋ, ಅದಕ್ಕೆ ಬೇಕಾದ ಎಲ್ಲ ಖರ್ಚುಗಳನ್ನು ನಾನು ನೋಡಿಕೊಳ್ಳುತ್ತೇನೆ” ಎಂದು ಆತನನ್ನು ಹುರಿದುಂಬಿಸುತ್ತಾಳೆ. ಇದರಿಂದ ಅಪಮಾನಿತರಾದ ಪೋರ್ಚುಗೀಸರು ಮತ್ತೆ ಬಂದರು ಕದನಕ್ಕೆ. ಎಂದಿನAತೆ ರಾಣಿ ಅಬ್ಬಕ್ಕಳ ವೀರಾವೇಶಕ್ಕೆ, ಅವಳ ಸೈನಿಕರ ಪರಾಕ್ರಮಕ್ಕೆ ಸೀಮೆಯೇ ಇರಲಿಲ್ಲ, ಆದರೆ ತನ್ನ ಗಂಡ ಲಕ್ಷö್ಮಪ್ಪ ಬಂಗರಸ ಪೋರ್ಚುಗೀಸರ ಜೊತೆ ಸೇರಿಕೊಂಡು ನಡೆಸಿದ ದ್ರೋಹದಿಂದಾಗಿ ಅಬ್ಬಕ್ಕ ಸೆರೆಸಿಕ್ಕುವಂತಾಯ್ತು. ಕಲ್ಲಿಕೋಟೆ ಅರಸನ ಸಂಧಾನದಿAದ ಬಿಡುಗಡೆಯಾಗಿ ಬಂದ ಆ ಕಡಲ ತಡಿಯ ಸಿಂಹಿಣಿ, ಮುಂದೆ ೧೫೮೮ರವರೆಗೆ ಉಳ್ಳಾಲದ ರಾಣಿಯಾಗಿ ಅಜೇಯಳಾಗಿ ರಾಜ್ಯಭಾರ ನಡೆಸುತ್ತಾಳೆ. ಮೀಸೆ ತಿರುವುತ್ತಲೇ ಸಿಂಹಾಸನದ ಮೇಲೆ ಕುಳಿತ ಅನೇಕ ರಾಜ ಮಹಾರಾಜರೇ ಆ ಐರೋಪ್ಯರ ಕಾನೂನುಗಳಿಗೆ ಬಗ್ಗಿ ಸಲಾಮು ಹಾಕುತ್ತಿದ್ದ ಕಾಲಘಟ್ಟದಲ್ಲಿ, ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಆ ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಆ ವೀರ ಮಾತೆ ಅಬ್ಬಕ್ಕಳನ್ನು ತಾಯಿ ಭಾರತಿ ಪುತ್ರಿಯಾಗಿ ಪಡೆದು ಇಂದಿಗೆ ಐನೂರು ಸಂವತ್ಸರಗಳು.